ದೀಪವು ನಿನ್ನದೆ, ಗಾಳಿಯು ನಿನ್ನದೆ, 

ಆರದಿರಲಿ ಬೆಳಕು

ಕಡಲು ನಿನ್ನದೆ, ಹಡಗು ನಿನ್ನದೆ, 

ಮುಳುಗದಿರಲಿ ಬದುಕು || ಪ ||

ಬೆಟ್ಟವು ನಿನ್ನದೆ, ಬಯಲು ನಿನ್ನದೆ, 

ಹಬ್ಬಿ ನಗಲಿ ಪ್ರೀತಿ

ನೆಳಲೋ, ಬಿಸಿಲೋ ಎಲ್ಲವೂ ನಿನ್ನವೆ,

ಇರಲಿ ಏಕರೀತಿ       || ದೀಪವು ನಿನ್ನದೆ ||

ಆಗೊಂದು ಸಿಡಿಲು, ಈಗೊಂದು ಮುಗಿಲು, 

ನಿನಗೆ ಅಲಂಕಾರ

ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು,

ನಿನಗೆ ನಮಸ್ಕಾರ       || ದೀಪವು ನಿನ್ನದೆ ||

ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ,

ನಿನ್ನ ಪ್ರತಿಧ್ವನಿ,

ಆ ಮಹಾಕಾವ್ಯ, ಈ ಭಾವಗೀತೆ,

ನಿನ್ನ ಪದಧ್ವನಿ       || ದೀಪವು ನಿನ್ನದೆ ||

ದೀಪವು ನಿನ್ನದೆ, ಗಾಳಿಯು ನಿನ್ನದೆ,

ಆರದಿರಲಿ ಬೆಳಕು

ಕಡಲು ನಿನ್ನದೆ, ಹಡಗು ನಿನ್ನದೆ,

ಮುಳುಗದಿರಲಿ ಬದುಕು